ತಲೆ ಬುಡ ಇಲ್ಲದ ಧಾರಾವಾಹಿಗಳ ನಡುವೆ ಮಾಸ್ಟರ್ ಪೀಸ್ ಎನಿಸಿಕೊಂಡ ಅದ್ಭುತ ಧಾರಾವಾಹಿ.. ಚಿಕ್ಕೆಜಮಾನಿಯ ಈ ನಟ ನಿಜಕ್ಕೂ ಯಾರು ಗೊತ್ತಾ..

0 views

ಕಿರುತೆರೆಯಲ್ಲಿ ಧಾರಾವಾಹಿಗಳಾಗಲಿ ಅಥವಾ ರಿಯಾಲಿಟಿ ಶೋಗಳಾಗಲಿ ಅದರ ಮೂಲ ಉದ್ದೇಶ ಮನರಂಜನೆಯೇ.. ಅತ್ತ ವಾಹಿನಿ ಅವರಿಗೆ ಮನರಂಜನೆಯ ಜೊತೆಗೆ ರೇಟಿಂಗ್ ಸಹ ಅಷ್ಟೇ ಮುಖ್ಯ ಅನ್ನುವುದು ಸತ್ಯ.. ಆದರೆ ಏನೇ ಪ್ರಯತ್ನಗಳಾಗಲಿ ಅಥವಾ ಮತ್ತಿನ್ನೇನೇ ಆಗಲಿ‌ ಜನರ ಮನಸ್ಸಿನಲ್ಲಿ‌ ಕೆಲವೊಂದು ಧಾರಾವಾಹಿಗಳು ವಿಶೇಷ ಸ್ಥಾನವನ್ನು‌‌‌ ಮಾಡಿಕೊಳ್ಳುತ್ತವೆ.. ಅಂತಹ ಧಾರಾವಾಹಿಗಳಲ್ಲಿ‌ ಮಾಸ್ಟರ್ ಫೀಸ್ ಎನಿಸಿಕೊಂಡ ಧಾರಾವಾಹಿ ಚಿಕ್ಕೆಜಮಾನಿ..

ಹೌದು ಸಾಮಾನ್ಯವಾಗಿ ಬಹುತೇಕ ಎಲ್ಲಾ ಧಾರಾವಾಹಿಗಳೂ ಸಹ ಒಳ್ಳೆಯ ಆರಂಭ ಮಾಡುತ್ತವೆ.. ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತದೆ.. ಕತೆಯೂ ಸಹ ಕುತೂಹಲ ಮೂಡಿಸುತ್ತದೆ.. ಆದರೆ ತಿಂಗಳುಗಳು‌ ಕಳೆದಂತೆ ಧಾರಾವಾಹಿಗೆ ತಲೆ ಬುಡ ಇಲ್ಲವೆನ್ನುವಂತೆ ಅರ್ಥವಿಲ್ಲದ ರೀತಿಯಲ್ಲಿ ಧಾರಾವಾಹಿಯನ್ನು ಮುಂದುವರೆಸುತ್ತಾರೆ.. ಇನ್ನು ಶುರುವಿನಲ್ಲಿ ಧಾರಾವಾಹಿಯನ್ನು ನೋಡಲು ಶುರು ಮಾಡಿದ ಜನ ಬೇರೆ ದಾರಿ ಇಲ್ಲದೇ ಧಾರಾವಾಹಿ ನೋಡೋದನ್ನು ಮುಂದುವರೆಸುತ್ತಾರೆ.. ಆದರೆ ಅದೆಲ್ಲದಕ್ಕೂ ಭಿನ್ನವಾಗಿ ವಿಶೇಷ ಸ್ಥಾನದಲ್ಲಿ ನಿಲ್ಲಬಲ್ಲ ಧಾರಾವಾಹಿ ಎಂದರೆ ಅದು ಚಿಕ್ಕೆಜಮಾನಿ..

ಹೌದು ಈ ಧಾರಾವಾಹಿಯನ್ನು ಹೊಗಳಿ ಬರೆಯುವುದು ನಿಜಕ್ಕೂ ಅತಿಶಯೋಕ್ತಿ ಎನಿಸುತ್ತಿಲ್ಲ ನನಗೆ.. ಇದಕ್ಕೆ ಕಾರಣವೂ ಇದೆ.. ಹೌದು ಕನ್ನಡದಲ್ಲಿ ಟಿ ಎನ್ ಸೀತಾರಾಮ್ ಅವರ ಧಾರಾವಾಹಿಗಳು ಮನಸ್ಸಿಗೆ ಬೇರೆಯದ್ದೇ ರೀತಿಯ ಸಂತೋಷವನ್ನು ನೀಡುತಿತ್ತು.. ಎಲ್ಲಿಯೂ ಯಾವುದೇ ರೀತಿಯ ಅತಿರೇಕವಿಲ್ಲದೇ.. ಕತೆಯನ್ನು ಸುಮ್ಮ ಸುಮ್ಮನೆ ಸಿಕ್ಕ ಸಿಕ್ಕಂತೆ ಬೇರೆ ರೀತಿಯಲ್ಲಿ ಸಾಗಿಸದೇ ನವಿರಾದ ನಿರೂಪಣೆಯಂತೆ ಸಾಗುತ್ತಿರುತ್ತದೆ.. ಎರಡು ವರ್ಷದ ಹಿಂದೆ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಅದಕ್ಕೊಂದು ಉದಾಹರಣೆ.. ಇನ್ನು ಚಿಕ್ಕೆಜಮಾನಿ ವಿಚಾರಕ್ಕೆ ಬರುವುದಾದರೆ ಇದೊಂದು ಡಬ್ಬಿಂಗ್ ಧಾರಾವಾಹಿ ಎಂಬುದು ನಿಜ.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಎರಡು ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ ಈ ಚಿಕ್ಕೆಜಮಾನಿ.. ನಮ್ಮ ಕೆಜಿಎಫ್ ಸಿನಿಮಾ ಚೆನ್ನಾಗಿದ್ದ ಕಾರಣ ಹೊರ ರಾಜ್ಯದವರು ಬೇರೆ ದೇಶದವರು ಹೇಗೆ ಒಪ್ಪಿಕೊಂಡರೋ ಅದೇ ರೀತಿ ಧಾರಾವಾಹಿ ಚೆನ್ನಾಗಿರುವ ಕಾರಣ ಅದರಲ್ಲೂ ನಮ್ಮ ಭಾಷೆಗೆ ಡಬ್ ಆಗಿ ಮೂಡಿ ಬರುತ್ತಿರುವ ಒಂದು ಅದ್ಭುತ ಧಾರಾವಾಹಿಯನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ..

ಹೌದು ಮೂಲ ಹಿಂದಿಯಲ್ಲಿ‌ ಪ್ರಸಾರವಾದ ಈ ಧಾರಾವಾಹಿ ಕಳೆದ ವರ್ಷದಿಂದ ಕನ್ನಡದಲ್ಲಿಯೂ ಪ್ರಸಾರವಾಗುತ್ತಿದೆ.. ನಿಜಕ್ಕೂ ಎಲ್ಲಿಯೂ ಎಂದೂ ಸಹ ಅನಾವಶ್ಯಕವಾದದ್ದು ಎಂದು ಹುಡುಕಿದರೂ ಏನೂ ಸಿಗದ ಧಾರಾವಾಹಿಯಾಗಿದೆ.. ಹೌದು ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಕತೆಯಂತೆ ಧಾರಾವಾಹಿ ಮೂಡಿ ಬಂದಿದ್ದು.. ಲಂಡನ್ ನಲ್ಲಿ ಬ್ಯಾರಿಸ್ಟರ್ ಆಗಿ ಬರುವ ಹೀರೋ ಅನಿರುದ್ಧ್ ರಾಯ್ ಚೌಧರಿ.. ಇತ್ತ ಎಳೆ ವಯಸ್ಸಿಗೆ ಮೂಡ ನಂಬಿಕೆಗಳಿಗೆ ಜೀವ ಕಳೆದುಕೊಳ್ಳುತ್ತಿದ್ದ ಪುಟ್ಟ ಭೂಮಿಕಾ.. ಅವಳನ್ನು ಒಂದು ಅನಿಷ್ಟ ಪದ್ಧತಿಯಿಂದ ರಕ್ಷಣೆ ಮಾಡಲು ಬೇರೆ ದಾರಿಯೇ ಇಲ್ಲದೇ ಬಾಲ್ಯ ವಿವಾಹವಾಗೋದು.. ಆ ರೀತಿ ಮದುವೆಯಾದರೂ ಸಹ ಭೂಮಿಕಾಳನ್ನು ತನ್ನ ಜವಾಬ್ದಾರಿ ಎಂದು ಮಾತ್ರವೇ ಅನಿರುದ್ಧ್ ಭಾವಿಸಿ ಸಾಕಷ್ಟು ಎಡರು ತೊಡರುಗಳು ಸವಾಲುಗಳನ್ನು ದಾಟಿ ಆಕೆಯನ್ನು ಲಂಡನ್ ಗೆ ಕಳುಹಿಸಿ ಬ್ಯಾರಿಸ್ಟರ್ ಮಾಡಿಸೋದು.. ಇತ್ತ ಸದಾ ಪ್ರೀತಿ ವಿಶ್ವಾರದಿಂದ ಇದ್ದ ಅನಿರುದ್ಧ್ ಎರಡು ಊರುಗಳ ನಡುವಿನ ವೈಷಮ್ಯದಿಂದಾಗಿ ತಾನೂ ಸಹ ದ್ವೇಷದ ಹಾದಿ ಹಿಡಿಯೋದು ನಂತರ ಭೂಮಿಕಾ ಮರಳಿ ಬಂದು ಪ್ರೀತಿಯಿಂದಲೇ ಧ್ವೇಷವನ್ನು ಅಳಿಸಬೇಕೆನ್ನುವುದು.. ಆಹಾ ನಿಜಕ್ಕೂ ಧಾರಾವಾಹಿ ನೋಡುತ್ತಿದ್ದರೆ ಕಣ್ಣಿಗೆ ಮಾತ್ರವಲ್ಲ ಮನಸ್ಸಿಗೆ ಮುದ ನೀಡುತ್ತದೆ..

ಪುಟ್ಟ ಹುಡುಗಿ ಭೂಮಿಕಾ ಅನಿರುದ್ಧ್ ನನ್ನು ಗಂಡ ಎಂದು ಒಪ್ಪಿಕೊಂಡಾಗ ಎಂತಹುದೇ ಪರಿಸ್ಥಿತಿಯಲ್ಲಿಯೂ ಅನಿರುದ್ಧ್ ಆಕೆಯನ್ನು ಹೆಂಡತಿ ಎಂದುಕೊಳ್ಳದೇ ಆಕೆಯ ಜವಾಬ್ದಾರಿ ಮಾತ್ರ ನಿರ್ವಹಿಸುವಾಗ ಪ್ರೇಕ್ಷಕರಿಗೂ ಸಹ ಅನಿರುದ್ಧ್ ಮೇಲೆ ಸಿಟ್ಟು ಬರುವ ಸನ್ನಿವೇಶ.. ಆದರೆ ನಿರ್ದೇಶಕರು ಮಾತ್ರ ಎಲ್ಲಿಯೂ ಪ್ರೇಕ್ಷಕರ ಆಸೆಗೆ ಒತ್ತು ಕೊಡದೇ ಸರಿಯಾದ ದಾರಿಯಲ್ಲಿ ಸಾಗಿ ಭೂಮಿಕಾ ಎಂಟು ವರ್ಷ ಲಂಡನ್ ನಲ್ಲಿ ವಿಧ್ಯಾಭ್ಯಾಸ ಮುಗಿಸಿ ಬಂದ ನಂತರವೇ ಹೊಸದಾಗಿ ಇಬ್ಬರ ನಡುವೆ ಪ್ರೀತಿ ಮೂಡುವಂತೆ ಮಾಡಿದ್ದು ನಿಜಕ್ಕೂ ಜೀವನದಲ್ಲಿ ಮನಸ್ಸನ್ನು ಸದಾ ಹತೋಟಿಯಲ್ಲಿಡಬೇಕೆಂದು ಪ್ರೇಕ್ಷಕರಿಗೆ ಹೇಳಿದಂತಿದೆ..

ಇನ್ನು ಅನಿರುದ್ಧ್ ಪಾತ್ರಕ್ಕೆ ಜೀವ ತುಂಬಿ ನಿಜಕ್ಕೂ ಈ ಕತೆ ನಡೆದಿದೆ.. ಅದನ್ನೇ ನಾವು ನೋಡುತ್ತಿದ್ದೇವೆ ಎನ್ನುವಂತೆ ಅಭಿನಯಿಸಿರುವ ನಟ ಪ್ರವಿಷ್ಟ್ ನಿಜಕ್ಕೂ ದೊಡ್ಡ ಮಟ್ಟದ ಪ್ರಶಂಸೆಗೆ ಅರ್ಹರಾಗಿದ್ದಾರೆ.. ಅಷ್ಟಕ್ಕೂ ಈ ನಟ ಯಾರು ಎಂದು ತಿಳಿದರೆ ಆಶ್ಚರ್ಯವಾಗಬಹುದು.. ಹೌದು ಈತ ಈ ಹಿಂದೆ ಕನ್ನಡದಲ್ಲಿ ಡಬ್ ಆದ ಮಹಾಭಾರತ ಧಾರಾವಾಹಿಯಲ್ಲಿ ಉತ್ತರ ಕುಮಾರನ ಪಾತ್ರ ಮಾಡಿದ ಆ ಸಣ್ಣ ಹುಡುಗನೇ.. ಅಷ್ಟೇ ಅಲ್ಲದೇ ಸೀತೆಯ ರಾಮ ಧಾರಾವಾಹಿಯಲ್ಲಿ ಬಾಲ ಭರತನ ಪಾತ್ರದಲ್ಲಿ ಕಾಣಿಸಿಕೊಂಡ ನಟನೂ ಈತನೇ.. ನಿಜಕ್ಕೂ ಅನಿರುದ್ಧ್ ರಾಯ್ ಚೌಧರಿ ಪಾತ್ರದ ಮೂಲಕ ಸಮಾಜಕ್ಕೆ ಸಾಕಷ್ಟು ಸಂದೇಶ ನೀಡಿದ ನಟ ಎಂದರೆ ತಪ್ಪಾಗಲಾರದು.. ಕತೆ ಬರೆದ ಹಾಗೂ ನಿರ್ದೇಶನ ಮಾಡಿದವರಿಗೆ ಹೆಚ್ಚು ಪ್ರಶಂಸೆ ನೀಡಬೇಕಾದರೂ ಸಹ ಆ ಪಾತ್ರಕ್ಕೆ ಜೀವ ತುಂಬಿದ ಅನಿರುದ್ಧ್ ಎಲ್ಲರ ಮನಸ್ಸಿನಲ್ಲಿ ವಿಶೇಷ ಸ್ಥಾನ ಮಾಡಿಕೊಂಡಿದ್ದಾರೆ..

ಇನ್ನು ಪುಟ್ಟ ಭೂಮಿಕಾ ಕೂಡ ತನ್ನ ಮುಗ್ಧ ಹಾಗೂ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ಹಾಗೆಯೇ ಸೆಳೆದು ಬಿಡುವಳೆಂದರೆ ಅಷ್ಟೇ ಸತ್ಯ.. ಜೊತೆಗೆ ದೊಡ್ಡ ಮಾವನವರ ಪಾತ್ರ ಮಾಡಿರುವ ರಿಷಿ ಖುರನಾ, ಸಂಪೂರ್ಣ, ಸುಮತಿ ಅಮ್ಮ ಹೀಗೆ ಪ್ರತಿಯೊಂದು ಪಾತ್ರವೂ ಸಹ ಮನಸ್ಸಿಗೆ ಹತ್ತಿರವಾಗಿ ಬಿಡುತ್ತದೆ‌.. ಇನ್ನು ಭೂಮಿಕಾಳ ಚಿಕ್ಕ ವಯಸ್ಸಿನ ಅಷ್ಟೂ ದಿನಗಳಲ್ಲಿ ಎಲ್ಲಿಯೂ ಸಹ ಸ್ವಲ್ಪವೂ ಮುಜುಗರವಾಗದ ರೀತಿ ನಿರ್ದೇಶಕರು ತೆರೆ ಮೇಲೆ ತಂದಿರುವುದು ಪ್ರಶಂಸನೀಯವಾದದ್ದು.. ಇನ್ನು ಭೂಮಿಕಾ ತನ್ನ ವಿಧ್ಯಾಭ್ಯಾಸ ಮುಗಿಸಿ ಮರಳಿ ದೇಶಕ್ಕೆ ಬಂದು ದ್ವೇಷವನ್ನು ಅಳಿಸಿ ಪ್ರೀತಿ ಮೂಡಿಸೋ ಆ ಕ್ಷಣ ಸಂದರ್ಭಕ್ಕೆ ಅವಶ್ಯಕವಾದಂತೆ ಅನಿರುದ್ಧ್ ಹಾಗೂ ಭೂಮಿಕಾ ನಡುವೆ ಪ್ರೀತಿಯ ಕ್ಷಣಗಳನ್ನು ಸೃಷ್ಟಿ ಮಾಡಿದೆ.. ಎಷ್ಟೇ ವರ್ಷಗಳು ಕಳೆದರೂ ಸಹ ಅನಿರುದ್ಧ್ ಆಗಲಿ ಭೂಮಿಕಾ ಆಗಲಿ ತಮ್ಮ ಮೂಲ ಆದರ್ಶಗಳನ್ನು ಬಿಡದೇ ಜನರಿಗೆ ಮಾದರಿಯಾಗಿ ನಿಲ್ಲುವುದು ಚೆಂದವೆನಿಸುತ್ತದೆ..

ಇದೆಲ್ಲದರ ಜೊತೆಗೆ ಅಮ್ಮ ದೂರ ಇರುವ ಪುಟ್ಟದೊಂದು ಹೆಣ್ಣು ಮನಸ್ಸಿಗೆ ಮುಟ್ಟಿನ ಬಗ್ಗೆ ಅನಿರುದ್ಧ್ ತಿಳಿಸುವ ರೀತಿ.. ಹೆಣ್ಣಿಗೆ ಸಮಾಜದಲ್ಲಿ ಎಲ್ಲಾ ರೀತಿಯ ಹಕ್ಕು ಇದೆ ಎಂದು ತಿಳಿಸುವ ರೀತಿ.. ವಿಧ್ಯೆಗಿಂತ ಮುಖ್ಯ ಮತ್ಯಾವುದೂ ಇಲ್ಲ ಎಂದು ಆ ಪುಟ್ಟ ಮನಸ್ಸನ್ನು ಸರಿಯಾದ ದಾರಿಯಲ್ಲಿ ಹೋಗುವ ಹಾಗೆ ಮಾಡುವ ಪರಿ.. ಒಮ್ಮೆ ಜವಾಬ್ದಾರಿ ತೆಗೆದುಕೊಂಡ ನಂತರ ಅದನ್ನು ಕೊನೆವರೆಗೂ ನಿಭಾಯಿಸುವ ರೀತಿ.. ಹೆಣ್ಣಿಗೆ ಆತ ಗೌರವ ನೀಡುವ ಮೂಲಕ ಆತನ ಗೌರವವನ್ನೂ ಹೆಚ್ಚಿಸಿಕೊಳ್ಳುವಂತಹ ಸಾಕಷ್ಟು ವಿಶೇಷ ಸಂದರ್ಭಗಳು ಧಾರಾವಾಹಿಯಲ್ಲಿ ಕಾಣ ಸಿಗುತ್ತದೆ.. ನೋಡುಗರ ಮನಸ್ಸಿಗೆ ಸಂತೋಷವನ್ನೂ ಸಹ ನೀಡುತ್ತದೆ..

ಇನ್ನು ಅತ್ತ ಹಿಂದಿಯಲ್ಲಿ ಅದಾಗಲೇ ಧಾರಾವಾಹಿ ಮುಕ್ತಾಯಗೊಂಡಿದ್ದು ಕನ್ನಡದಲ್ಲಿಯೂ ಇನ್ನು ಕೆಲ ತಿಂಗಳ ಪ್ರಸಾರವಷ್ಟೇ ಬಾಕಿ ಇದೆ.. ಇನ್ನು ಸಧ್ಯ ಧಾರಾವಾಹಿಯಲ್ಲಿ ಅನಿರುದ್ಧ್ ಭೂಮಿಕಾ ಕಲ್ಯಾಣದ ಸಂಚಿಕೆಗಳು ನೆರವೇರುತ್ತುದ್ದು ಈಗ ಪ್ರಸಾರವಾಗುತ್ತಿರುವ ಸಂಚಿಕೆಗಳನ್ನು ನೋಡಿದರೆ ಮುಖದಲ್ಲೊಂದು ಮುಗುಳುನಗು ಮೂಡುವುದು ಖಂಡಿತ.. ಇಂತಹ ಚೆಂದದೊಂದು ಧಾರಾವಾಹಿ‌ ನೋಡಿ ಅದರ ಬಗ್ಗೆ ಬರೆಯದಿದ್ದರೇ ಮನಸ್ಸು ಒಪ್ಪದೆನ್ನುವ ಕಾರಣಕ್ಕೆ ಬರೆದಿರುವೆ ಈ ಮನಸ ಮಾತ.. ಸಾಧ್ಯವಾದರೆ ತಪ್ಪದೇ ನೋಡಿ ಆನಂದಿಸಿ.. ಎಷ್ಟೋ ತಲೆ ಬುಡ ಇಲ್ಲದ ಧಾರಾವಾಹಿಗಳ ನಡುವೆ ಇದು ನಿಜಕ್ಕೂ ವಿಶೇಷ ಎನಿಸುವುದು.. ಒಳ್ಳೆಯ ಕತೆ, ಮೌಲ್ಯಯುತವಾದ ಹಾಗೂ ಅರ್ಥಪೂರ್ಣವಾದ ಧಾರಾವಾಹಿಯೊಂದನ್ನು ಕನ್ನಡಕ್ಕೆ ತಂದದ್ದಕ್ಕೆ ಕಲರ್ಸ್ ಕನ್ನಡ ವಾಹಿನಿಯ ಪರಮೇಶ್ವರ್ ಗುಂಡ್ಕಲ್ ಅವರಿಗೆ ಹಾಗೂ ತಂಡಕ್ಕೆ ಧನ್ಯವಾದಗಳನ್ನು ತಿಳಿಸಲೇ ಬೇಕು.. ರಮ್ಯ ಜಗತ್, ಮೈಸೂರು..