ಕ್ಷಮೆ ಇರಲಿ.. ಯಾರಿವರು?

0 views

ಕ್ಷಮೆ ಇರಲಿ.. ಅಣ್ಣಾ.. ನೀವು ಕುಟುಂಬದಲ್ಲಿ ನನ್ನನ್ನು ಒಬ್ಬಳು ಎಂದು ಕೊಟ್ಟ ಸಲುಗೆಯಿಂದಾಗಿ.. ನಿಮ್ಮ ಅನುಮತಿ‌ ಇಲ್ಲದೇ ನಿಮ್ಮ ಪೇಜ್ ನಲ್ಲಿ ಪೋಸ್ಟ್ ಮಾಡುತ್ತಿರುವೆ.. ಕೆಲವೊಮ್ಮೆ ಮನುಷ್ಯನಿಗೆ ಹಣಕಾಸಿನ ಸಹಾಯಕ್ಕಿಂತ ಮಾನಸಿಕವಾಗಿ ನಮ್ಮ ಜೊತೆ ಯಾರೋ ಒಬ್ಬರು ಇದ್ದಾರೆ.. ಎಲ್ಲೋ ಒಂದು ಕಡೆ ಇದ್ದರೂ ಸಹ ನಮ್ಮವರು.. ನಮಗಾಗಿ ಕಾಳಜಿ ಮಾಡೊರು.. ಇದ್ದಾರೆ ಅನ್ನೋ ಧೈರ್ಯ ನಮ್ಮಿಂದ ಎಂತಹ ಕಷ್ಟಗಳನ್ನಾದರೂ ಎದುರಿಸಿ ಮುನ್ನಡೆಯುವ ದಾರಿಯನ್ನು ತೋರುತ್ತದೆ.. ಜೀವನದಲ್ಲಿ ಆ ರೀತಿಯ ಸಂದರ್ಭಗಳನ್ನ ಎದುರಿಸಿ ಮುನ್ನಡೆಯುತ್ತಿದ್ದಾಗ ನನಗೆ ಸಿಕ್ಕವರು ಅನಿರುದ್ಧ್ ಅವರು.. ಪತ್ರಕರ್ತೆಯಾಗಿದ್ದ ನಾನು ಹಾಗೂ ಅನಿರುದ್ಧ್ ಅವರು ಯಾವುದೋ ಕೆಲಸದ ವಿಚಾರಕ್ಕೆ ಮಾತನಾಡಿದೆವು.. ನಂತರ ಸ್ನೇಹ.. ನಂತರ ಸೋದರತ್ವದ ಸಂಬಂಧ ಬೆಳೆಯಿತು..

ನಾನು ಮೈಸೂರು.. ಆದರೆ ಬೆಂಗಳೂರಿನಲ್ಲಿ ನನ್ನದು ಒಂದು ಕುಟುಂಬ ಇದೆ ಎಂದು ಅನಿಸಿದ್ದು ಅಣ್ಣ ಹಾಗೂ ಕೀರ್ತೀಜಿ ಅವರು ತೋರಿದ ಪ್ರೀತಿಯಿಂದ.. ಇನ್ನು ಅನಿರುದ್ಧ್ ಅವರ ಬಗ್ಗೆ ಮಾತಿನಲ್ಲಿ ಹೇಳಲಾಗದು.. ಇದು ನಿಜಕ್ಕೂ ಅತಿಶಯೋಕ್ತಿಯಲ್ಲ.. ಈ ರೀತಿಯ ಗುಣದ ಮನುಷ್ಯ ನಿಜಕ್ಕೂ ಹೀಗೂ ಇರಬಹುದಾ ಎನಿಸಿದ್ದಂತೂ ಸತ್ಯ.. ಕೆಲವೊಮ್ಮೆ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ನಡೆಯುವಾಗ ನೀವು ಆ ರೀತಿ ಮಾತನಾಡಿದರೆ ಜನರು ತಪ್ಪು ತಿಳ್ಕೋತಾರೆ ಬೇಡ ಅಣ್ಣಾ ಎಂದು ನಾನು ಬಹಳಷ್ಟು ಬಾರಿ ಹೇಳಿದ್ದೂ ಉಂಟು.. ಆದರೆ ಇರ್ಲಿ ಕೆಲವೊಂದು ಒಳ್ಳೆದ್ ಮಾಡುವಾಗ ಒಂದಿಬ್ಬರು ತಪ್ಪು ತಿಳ್ಕೊಂಡ್ರೆ ಪರವಾಗಿಲ್ಲಾಮ್ಮಾ ಎಂದು ಅನಿರುದ್ಧ್ ಅವರು ಹೇಳುವುದು ಸಾಮಾನ್ಯದ ಮಾತಾಗಿ ಹೋಯ್ತು ನನಗೆ..‌ ನಿಜಕ್ಕೂ ನಿಮ್ಮ ಆಲೋಚನೆಗಳೇ ಬೇರೆ..

ಎಷ್ಟೋ ಬಾರಿ ಅಣ್ಣಾ ಇಷ್ಟೊಂದ್ ಒಳ್ಳೆತನ ಒಳ್ಳೆದಲ್ಲಾ.. ಕೆಲವರು ಇದನ್ನ ತಪ್ಪು ತಿಳ್ಕೋತಾರೆ ಅಂತ ನಾನ್ ಹೇಳಿದ್ದು ಉಂಟು.. ಆದರೆ ಅದನ್ನೂ ಕೂಡ ಇರ್ಲಿ ಬಿಡಮ್ಮಾ.. ದೇವರಿಗೆ ಗೊತ್ತಾಗಲ್ವಾ.. ನಮ್ ಒಳ್ಳೆತನದ ಲೆಕ್ಕ ಅವನಿಗೆ ಕೊಟ್ರೆ ಸಾಕು ಅನ್ನೋ ಮಾತು ಎಲ್ಲೋ ಒಂದು ಕಡೆ ಮನಸ್ಸಿಗೆ ನಾಟಿತು.. ಆದರೂ ಕೂಡ ನಿಮ್ಮ ಮೇಲಿನ ಕಾಳಜಿಯಿಂದ ಕೀರ್ತೀಜಿ ಬಳಿಯೂ ಈ ವಿಚಾರ ಪ್ರಸ್ತಾಪ ಮಾಡೋ ಮುನ್ನವೇ ಅವರು ನಿಮಗಿಂತ ಒಂದು ಕೈ ಹೆಚ್ಚು.. ಅವರೇ ಕೆಲವೊಂದು ಸಮಾಜ ಮುಖಿ ಕಾರ್ಯಗಳ ಬಗ್ಗೆ ಹಾಗೆ ಮಾಡಬೇಕು.. ಹೀಗೆ ಮಾಡಬೇಕು.. ನಾವುಗಳೇ ಮೊದಲ ಹೆಜ್ಜೆ ಇಡಬೇಕು.. ಹೀಗೆ ಕೀರ್ತೀಜಿ ಅವರ ಸಾಕಷ್ಟು ಮಾತುಗಳ ಮೂಲಕ ನಾನು ಮೂಕಳಾದೆ..

ವಾರಕ್ಕೆ ಮೂರು ಬಾರಿಯಾದರೂ ಮಾತನಾಡುತ್ತಿದ್ದ ನಾವು.. ಕಳೆದ ನಾಲ್ಕು ತಿಂಗಳ ಹಿಂದೆ ನಾನು ಯಾವುದೋ ಕೆಲಸದ ಕಾರಣ ಮೆಸೆಜ್ ಹಾಗೂ ಕಾಲ್ ಮಾಡೋದು ನಿಲ್ಲಿಸಿದೆ.. ಒಂದು ವಾರದ ಬಳಿಕ ನನ್ನ ಫೋನ್ ರಿಂಗ್ ಆಗ ತೊಡಗಿತು.. ಅಣ್ಣಾ ಎಂದಷ್ಟೇ ನಂಬರ್ ಸೇವ್ ಆಗಿತ್ತು.. ಎಂದಿನಂತೆ ಫೋನ್ ರಿಸೀವ್ ಮಾಡಿ ಹೇಳಿ ಅಣ್ಣಾ ಎಂದೆ.. ಅತ್ತ ಹಲೋ ಎನ್ನುವ ಮಾತಿಲ್ಲ.. ಬದಲಿಗೆ ಆರೋಗ್ಯವಾಗಿದ್ದೀರಾ ರಾಜಾ.. ಏನಾಯ್ತು.. ಮನೆಯಲ್ಲಿ ಎಲ್ಲರೂ ಗಾಬರಿ‌‌‌ ಮಾಡಿಕೊಂಡಿದ್ರು.. ಏನಾಯ್ತು ಫೋನ್ ಮಾಡಿ ಕೇಳಿ ಅಂದ್ರು.. ಎಂದರು..

ನಿಜಕ್ಕೂ ನಿಮ್ಮಗಳ ದೊಡ್ಡತನಕ್ಕೆ ಕೈ ಮುಗಿದರೂ ತಪ್ಪಾಗಲಾರದು.. ಎಲ್ಲೋ ಇದ್ದ ನಾನು.. ಹೇಗೋ ಪರಿಚಯವಾದ ನಾನು.. ನಿಮಗೆ ಯಾರೂ ಅಲ್ಲದ ನಾನು.. ಇಷ್ಟೊಂದು ಕಾಳಜಿ ತೋರಿದಾಗ ಹೇಗೆ ತಡೆದುಕೊಳ್ಳಬೇಕು ಈ ಜೀವ? ಮುಂದೊಂದು ಜನ್ಮವಿದ್ದರೆ ನಿಮ್ಮ ಒಡ ಹುಟ್ಟಿ‌ ಈ ಪ್ರೀತಿ ಕಾಳಜಿಯ ಋಣ ತೀರಿಸಲು ಪ್ರಯತ್ನಿಸುವೆ.. ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು.. ಮುಂದೆ ಓದಿ..

ಹೀಗೆ ಪರಿಚಯದ ಒಬ್ಬರು ಸಿನಿಮಾದ ಟೀಸರ್ ಒಂದನ್ನು ಬಿಡುಗಡೆ ಮಾಡಿಸಿದ್ರು ಅದನ್ನ ಶೇರ್ ಮಾಡಿಬಿಡಿ ಸ್ವಲ್ಪ ಚಿತ್ರೀಕರಣದಲ್ಲಿ ಬ್ಯುಸಿ ಇದ್ದೇನೆ ಎಂದರು.. ಸರಿ ಎಂದು ಪೋಸ್ಟ್ ಮಾಡಿದೆ.. ಮತ್ತೊಮ್ಮೆ ಇನ್ನೊಂದು ವೀಡಿಯೋ ಕಳುಹಿಸಿ ಇದನ್ನೂ ಸಹ ಪೋಸ್ಟ್ ಮಾಡಿ ಎಂದು ಚಿತ್ರತಂಡದವರು ಕಳುಹಿಸಿದ್ದಾರೆ ಪೋಸ್ಟ್ ಮಾಡಿಬಿಡಿ ಎಂದರು.. ಆಯಿತೆಂದು ಅದನ್ನೂ ಪೋಸ್ಟ್ ಮಾಡಿದೆ.. ಎರಡು ತಾಸು ಬಿಟ್ಟು ಮತ್ತೊಂದು..‌. ಆಗ ನಾನು ನೇರವಾಗಿ ಹೇಳಿದೆ.. ಅಣ್ಣಾ ಪದೇ ಪದೇ ಇದನ್ನೇ ಶೇರ್ ಮಾಡಿದ್ರೆ ಕೆಲವರು ಹಣ ಪಡೆದು ಶೇರ್ ಮಾಡ್ತಿದ್ದೀರಾ ಎಂದುಕೊಳ್ತಾರೆ ಬೇಡ ಸಾಕು ಎಂದೆ.. ನನ್ನಣ್ಣನನ್ನು ಜನರ ತಪ್ಪು ತಿಳಿಯಬಾರದೆಂಬುದಷ್ಟೇ ನನ್ನ ಕಾಳಜಿಯಾಗಿತ್ತು.. ಆದರೆ ಅದಕ್ಕೆ ಅವರು ಕೊಟ್ಟ ಉತ್ತರ ಮಾತ್ರ ಜೀವನದಲ್ಲಿ ದೊಡ್ಡ ಪಾಠ ಕಲಿಸಿತು..

“ಇಬ್ಬರು ಅಥವಾ ಮೂರು ಜನ.. ಅಥವಾ ಹತ್ತು ಜನ ತಪ್ಪು ತಿಳಿದುಕೊಳ್ಳಬಹುದು.. ಆದರೆ ನಾನು ಮತ್ತೊಂದು ಬಾರಿ ಪೋಸ್ಟ್ ಮಾಡುವುದರಿಂದ ಮತ್ತೆ ಇನ್ನು ಐವತ್ತು ಜನ ಆ ಸಿನಿಮಾದ ಟ್ರೈಲರ್ ನೋಡಿ ಆ ಪ್ರತಿಭೆಗಳಿಗೆ ಸಹಾಯವಾಗಬಹುದು ಅಲ್ವಾ ರಾಜಾ ಎಂದರು.. ಆಗ ತಿಳಿತು.. ಯಾರೋ ಕೆಲವರು ತಪ್ಪು ತಿಳ್ಕೊಂಡ್ರೆ ತಿಳಿದುಕೊಳ್ಳಲಿ.. ಆ ಕಾರಣಕ್ಕಾಗಿ ಮತ್ತೊಬ್ಬರಿಗೆ ನಮ್ಮಿಂದಾಗುವ ಸಹಾಯವನ್ನು ನಾವು ನಿಲ್ಲಿಸಬಾರದು ಎಂದು ದೊಡ್ಡ ಪಾಠ ಕಲಿತೆ.. ಆ ಸಹಾಯದ ಅವಶ್ಯಕತೆ ಅವರಿಗಿದೆ.. ಸಹಾಯ ಮಾಡುವ ಶಕ್ತಿಯನ್ನು ಈ ಕ್ಷಣದಲ್ಲಿ ಭಗವಂತ ನಮಗೆ ಕೊಟ್ಟಿದ್ದಾನೆ ಎಂದಮೇಲೆ ಸುಮ್ಮನೆ ಸಹಾಯ ಮಾಡ್ತಾ ಇರಬೇಕು ಅಷ್ಟೇ.. ಎಂದರು.. ಇನ್ನು ಹೇಳ್ತಾ ಹೋದ್ರೆ ತುಂಬಾ ಇದೆ.. ಆದರೆ ಸದ್ಯಕ್ಕಿಷ್ಟು ಸಾಕು..

ಬರವಣಿಗೆಯನ್ನೇ ಬದುಕಾಗಿಸಿಕೊಂಡ ನಾನು ಬರವಣಿಗೆಯನ್ನಲ್ಲದೇ ಮತ್ತಿನ್ನೇನನು ಕೊಡಲು ಸಾಧ್ಯ.. ನಿಮ್ಮ ಒಳ್ಳೆಯತನ.. ನಿಮ್ಮ ದೊಡ್ಡ ಗುಣಗಳು.. ನಿಮ್ಮ ನಡವಳಿಕೆ ನಿಜಕ್ಕೂ ನನಗೆ ಸ್ಪೂರ್ತಿಯಾದ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿರುವಿರಿ.. ಇದೋ ನಿಮಗೆ ನನ್ನ ಈ ಬರವಣಿಗೆಯ ಉಡುಗೊರೆ.. ಹ್ಯಾಪಿ ಹುಟ್ದಬ್ಬ ಅಣ್ಣ.. ಸದಾ ಸಂತೋಷವಾಗಿರಿ.. ಇಂತಿ‌ ನಿಮ್ಮ ದೂರದೂರಿನ ಸಹೋದರಿ.. ನೀವು ಹಾಗೂ ಕೀರ್ತೀಜಿ ಅವರು ತೋರಿದ ಪ್ರೀತಿಗೆ ನಾ ಸದಾ ಚಿರಋಣಿ ಅಣ್ಣ..