ನೂರೆಂಟು ಔಷಧಿಯ ಗುಣಗಳನ್ನು ಹೊಂದಿದೆ ಪುಟಾಣಿ ಒಣದ್ರಾಕ್ಷಿ

0 views

ಒಣದ್ರಾಕ್ಷಿ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುವಂತಹ ಒಂದು ಡ್ರೈ ಫ್ರೂಟ್! ಸುಮ್ಮನೆ ಕುಳಿತಲ್ಲಿಯೇ ಒಂದೊಂದನ್ನೆ ಬಾಯಲ್ಲಿ ಹಾಕಿಕೊಳ್ಳುತ್ತಿದ್ದರೆ ಸಮಯ ಕಳೆದಿದ್ದೂ ಗೊತ್ತಾಗುವುದಿಲ್ಲ, ಎಷ್ಟು ತಿಂದೆವೆಂದೂ ಅರಿವಿರುವುದಿಲ್ಲ! ಈ ಸಿಹಿಯಾದ ಒಣದ್ರಾಕ್ಷಿ ಸಾಕಷ್ಟು ಸಿಹಿ ತಿನಿಸುಗಳಲ್ಲಿ ಬಳಸುವಂಥದ್ದು. ಅಲ್ಲದೇ ಸಾಕಷ್ಟು ತಿನಿಸುಗಳಲ್ಲಿ ಅಲಂಕಾರಕ್ಕೆ ಗೋಡಂಬಿಯ ಜೊತೆ ಬಳಸಲಾಗುತ್ತದೆ. ಹಾಗೆಯೇ ಉತ್ತರ ಭಾರತೀಯ ಬಿರ್ಯಾನಿ ಅನ್ನದಲ್ಲಿಯೂ ಬಳಸಲಾಗುತ್ತದೆ.

ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದೆ ಒಣದ್ರಾಕ್ಷಿ. ವಿವಿಧ ಬಗೆಯ ದ್ರಾಕ್ಷಿಯನ್ನು ಒಣಗಿಸಿ ಒಣದ್ರಾಕ್ಷಿಯನ್ನು ತಯಾರಿಸಲಾಗುತ್ತದೆ. ಇದು ಸುಲಭವಾಗಿ ಕೆಡುವುದಿಲ್ಲವಾದ್ದರಿಂದ ಮನೆಯಲ್ಲಿ ಸಾಕಷ್ಟು ಸಮಯ ಶೇಖರಿಸಿ ಇಡಬಹುದು.

ಒಣದ್ರಾಕ್ಷಿ ಶಕ್ತಿಯ ಆಗರ. ಹಾಗಾಗಿ ಯಾವುದೇ ವಯಸ್ಸಿನ ಜನರೂ ಕೂಡ ಇದನ್ನು ಸೇವಿಸಬಹುದು. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಹಾಕಿ ಅಥವಾ ಹಾಗೆಯೇ ಸೇವಿಸಬಹುದು. ದಿನವೂ ಐದರಿಂದ ಆರು ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಎದ್ದು ದ್ರಾಕ್ಷಿಯನ್ನು ತಿಂದು ಅದರ ನೀರನ್ನು ಸಹ ಕುಡಿಯಿರಿ. ಇದು ದೇಹದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ದೇಹದ ರಕ್ತ ಹೀನತೆಯನ್ನು ನಿವಾರಿಸುತ್ತದೆ. ಇದರಿಂದ ಉಂಟಾಗುವ ಸುಸ್ತು, ದಣಿವು ಕೂಡ ನಿವಾರಣೆಯಾಗುತ್ತದೆ. ನೀರಿನಲ್ಲಿ ನೆನೆಹಾಕಿ ತಿನ್ನಲು ಇಷ್ಟ ಇಲ್ಲದವರು ಹಾಗೆಯೇ ತಿನ್ನಬಹುದು. ಇದರಲ್ಲಿರುವ ಕಬ್ಬಿಣಾಂಶ ದೇಹದ ರಕ್ತ ಪರಿಚಲನೆಗೆ ಅತ್ಯಂತ ಉಪಯೋಗಕಾರಿ!

ಒಣದ್ರಾಕ್ಷಿಯಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಇರುವುದರಿಂದ ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುವುದು ಮಾತ್ರವಲ್ಲದೆ ಇದನ್ನು ದಿನವೂ ಮಿತವಾಗಿ ಸೇವಿಸುವುದರಿಂದ ಕಣ್ಣಿನ ದೃಷ್ಟಿಯ ಸಮಸ್ಯೆ ಕೂಡ ಮಾಯವಾಗುತ್ತದೆ. ಗಂಟು ನೋವು ಹಾಗೂ ಮೂಳೆಗಳು ದುರ್ಭಲವಾಗಿರುವುದಕ್ಕೂ ದಿನವೂ ಒಣದ್ರಾಕ್ಷಿಯನ್ನು ಸೆವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಇದರಲ್ಲಿರುವ ಕ್ಯಾಲ್ಶಿಯಂ ಮೂಳೆಗಳನ್ನು ಬಲಪಡಿಸುವಲ್ಲಿ ಅತ್ಯಂತ ಸಹಾಯಕಾರಿ.

ಮಲಬದ್ಧತೆ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಒಣದ್ರಾಕ್ಷಿ ಸೇವನೆಯಿಂದ ನಿವಾರಿಸಿಕೊಳ್ಳಬಹುದು. ಇದರಲ್ಲಿರುವ ಪೊಟ್ಯಾಶಿಯಂ ಹಾಗೂ ಮ್ಯಾಗ್ನೀಶಿಯಂ ನಿಂದಾಗಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ, ಕರುಳಿನ ಕ್ರಿಯೆಯನ್ನು ಸುಗಮ ಗೊಳಿಸಿ ಜೀರ್ಣಕ್ರಿಯೆ ಉತ್ತಮವಾಗುವಂತೆ ಮಾಡುತ್ತದೆ ಒಣದ್ರಾಕ್ಷಿ.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಒಣದ್ರಾಕ್ಷಿ. ಇದರಲ್ಲಿರುವ ಪೊಟ್ಯಾಶಿಯಂ ಅಂಶ ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನದಲ್ಲಿಡುತ್ತದೆ. ಗರ್ಭಿಣಿ ಸ್ತ್ರೀಯರು ಮಿತವಾಗಿ ಒಣದ್ರಾಕ್ಷಿಯನ್ನು ಸೇವಿಸಿದರೆ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಆದರೆ ಲಿವರ್ ಸಮಸ್ಯೆ ಇರುವವರು, ಮಧುಮೇಹ ಇರುವವರು, ಗರ್ಭಿಣಿಯಾಗಿರುವಾಗ ಮಧುಮೇಹ ಬಂದಿರುವವರು ಆದಷ್ಟು ಒಣದ್ರಾಕ್ಷಿಯನ್ನು ಸೇವಿಸದಿರುವುದು ಉತ್ತಮ. ಒಣದ್ರಾಕ್ಷಿಯನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಿರಿ. ದಿನಕ್ಕೆ ಹತ್ತು ಒಣದ್ರಾಕ್ಷಿಗಿಂತಲೂ ಅಧಿಕ ಒಣದ್ರಾಕ್ಷಿಯನ್ನು ಸೇವಿಸುವುದು ಒಳ್ಳೆಯದಲ್ಲ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಆರೋಗ್ಯವರ್ಧನೆಗೆ ಅಗತ್ಯವಿದ್ದಷ್ಟು ಒಣದ್ರಾಕ್ಷಿಯನ್ನು ತಪ್ಪದೇ ಸೇವಿಸಿ.