ಪ್ಯಾಕೆಟ್ ಹಾಲಿನಿಂದ ಶುದ್ಧವಾದ ತುಪ್ಪವನ್ನು ಮನೆಯಲ್ಲಿ ತಯಾರಿಸುವ ಸುಲಭ ವಿಧಾನ..

0 views

ತುಪ್ಪ ಅಂದ್ರೆ ಸಾಕು ಸಾಕಷ್ಟು ಜನರ ಬಾಯಲ್ಲಿ ನೀರೂರತ್ತೆ. ಯಾಕೆಂದರೆ ಹಲವು ತಿನಿಸುಗಳಲ್ಲಿ ತುಪ್ಪ ಒಂದು ಸಾಮಾನ್ಯವಾಗಿ ಬಳಸುವಂತಹ ಪದಾರ್ಥ. ಅದೂ ಅಲ್ಲದೇ ಮನೆಯಲ್ಲಿಯೂ ಕೂಡ ದೋಸೆ, ಚಪಾತಿ, ಬಿಸಿ ಅನ್ನ ಹೀಗೆ ಎಲ್ಲದಕ್ಕೂ ತುಪ್ಪವನ್ನು ಹಾಕಿಕೊಂಡು ತಿನ್ನುವ ಪದ್ಧತಿ ಬಳಕೆಯಲ್ಲಿದೆ. ಒಂದು ಕಡೆ ತುಪ್ಪ ತೂಕ ಇಳಿಸಲು ಹಾಗೂ ದೇಹದಲ್ಲಿನ ಎಲ್ಲಾ ಮಲೀನತೆಯನ್ನು ತೆಗೆಯಲು ಅಥವಾ ವಿಷಕಾರಿ ಅಂಶಗಳನ್ನು ತೆಗೆಯಲೂ ಕೂಡ ಬಳಸುವಂತಹ ವಸ್ತು.

ಹಾಗಾಗಿ ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ತುಪ್ಪವೂ ಶುದ್ಧವಾಗಿರುತ್ತದೆ ಎದು ಹೇಳಲು ಸಾದ್ಯವಿಲ್ಲ. ಹಳ್ಳಿಗಳಲ್ಲಿ ಹಸುವನ್ನು ಸಾಕುತ್ತಾರೆ ಹಾಗಾಗಿ ಶುದ್ಧವಾದ ತುಪ್ಪವನ್ನು ಮನೆಯಲ್ಲಿಯೇ ಮಾಡಿಕೊಳ್ಳುತ್ತಾರೆ.

ಆದರೆ ಇದೀಗ ಪೇಟೆಟಿಯಲ್ಲಿ ಇರುವವರು ಕೂಡ ತುಪ್ಪಕ್ಕಾಗಿ ಕೇವಲ ಮಾರುಕಟ್ಟೆಯನ್ನೇ ಅವಲಂಬಿಸಬೇಕಾಗಿಲ್ಲ. ಹಾಲನ್ನು ಮನೆಯಲ್ಲಿ ಪ್ರತಿದಿನ ಬಳಸುವವರು ಮನೆಯಲ್ಲಿಯೇ ಶುದ್ಧವಾದ ತುಪ್ಪವನ್ನು ತಯಾರಿಸಿಕೊಳ್ಳಬಹುದು. ಹೇಗೆ ಅಂತಿರಾ. ಮುಂದೆ ಓದಿ.

ದಿನವೂ ಮನೆಯಲ್ಲಿ ನಾವು ಹಾಲನ್ನು ಬಳಸುತ್ತೇವೆ. ಹಾಗಾಗಿ ದಿನವೂ ಒಂದು ಅಥವಾ ಅರ್ಧ ಲೀಟರ್ ಪ್ಯಾಕೆಟ್ ಹಾಲನ್ನು ಬಳಸುತ್ತೇವೆ. ಹಾಲನ್ನು ದಿನವೂ ಕಾಯಿಸುವಾಗ ಸ್ವಲ್ವ ಜಾಗರೂಕತೆಯಿಂದ ಕಾಯಿಸಬೇಕು. ಅಂದರೆ ಸಣ್ಣ ಉರಿಯಲ್ಲಿಟ್ಟು, ಸರಿಯಾಗಿ ಕೆನೆ ಬರುವವರೆಗೆ ಕಾಯಿಸಬೇಕು. ನಂತರ ಹಾಲನ್ನು ತಣಿಯಲು ಬಿಡಿ. ತಣಿದ ಹಾಲಿನ ಮೇಲೆ ಕಟ್ಟಿರುವ ಕೆನೆಯನ್ನು ದಿನವೂ ತೆಗೆದು ಒಂದು ಬಾಟಲಿಯಲ್ಲಿ ಶೇಖರಿಸಿ ಪ್ರಿಡ್ಜ್ ನಲ್ಲಿ ಶೇಖರಿಸಿಡಿ. ಸುಮಾರು ಒಂದು ವಾರ ಹೀಗೆ ಶೇಖರಿಸಿದ ಹಾಲಿನ ಕೆನೆಯಿಂದ ದಿನದ ಉಪಯೋಗಕ್ಕೆ ಸಾಕಾಗುವಷ್ಟು ತುಪ್ಪವನ್ನು ನೀವೇ ಮಾಡಿಕೊಳ್ಳಬಹುದು.

ಒಂದು ವಾರದ ಬಳಿಕ ಶೇಖರಿಸಿಟ್ಟ ಕೆನೆಗೆ ಒಂದು ಚಮಚ ಮಜ್ಜಿಗೆ/ಮೊಸರನ್ನು ಸೇರಿಸಿ ಕಲಸಿ, ನಂತರ ಇದನ್ನು ಪ್ರಿಡ್ಜ್ ನಲ್ಲಿಡದೆ ಒಂದು ರಾತ್ರಿ ಹೊರಗೇ ಇಡಿ. ಬೆಳಗ್ಗೆ ಬೆಣ್ಣೆ ತೆಗೆಯಲು ಸಿದ್ಧವಾಗಿರುತ್ತದೆ. ಇದನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ರುಬ್ಬಿ. ಉಳಿದ ಪದಾರ್ಥಗಳನ್ನು ರುಬ್ಬುವಂತೆ ನಿರಂತರವಾಗಿ ರುಬ್ಬದೇ ಆಗಾಗ ರುಬ್ಬಿದ್ದನ್ನು ತೆಗೆದು ನೋಡುತ್ತಾ ಅಗತ್ಯವಿದ್ದಲ್ಲಿ ನೀರನ್ನು ಹಾಕುತ್ತಾ ರುಬ್ಬಿ. (ಜ್ಯೂಸ್ ಮಾಡುವ ರೀತಿಯಲ್ಲಿ) ನಂತರ ಜಾರ್ ನ ಮೇಲ್ಭಾಗದಲ್ಲಿ ಬೆಣ್ಣೆ ಸಿದ್ಧವಾರಿರುತ್ತದೆ. ಇದನ್ನು ತೆಗೆದು ಒಂದು ನೀರಿನ ಪಾತ್ರೆಗೆ ಹಾಕಿ ಸ್ವಚ್ಛಗೊಳಿಸಿಕೊಳ್ಳಿ.

ಬೆಣ್ಣೆಯನ್ನು ಉಂಡೆಯಂತೆ ಮಾಡಿ ಒಂದು ಪಾತ್ರೆಗೆ ಹಾಕಿ ಕುದಿಸಿ. ಇದು ಕ್ರಮೇಣ ತುಪ್ಪವಾಗುತ್ತಾ ಬರುತ್ತದೆ. ತುಪ್ಪವನ್ನು ಕಾಯಿಸುವಾಗ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ. ಆದರೆ ಹಾಗೆಯೇ ಬಿಡದೆ ಅದನ್ನು ಒಂದು ಹುಟ್ಟಿನಿಂದ ಮೊಗಚುತ್ತಲೇ ಇರಬೇಕು. ಇದು ಸಂಪೂರ್ಣ ಕಂದು ಬಣ್ಣಕ್ಕೆ ಬಂದ ನಂತರ ಒಂದು ಪಾತ್ರೆಗೆ ಸೋಸಿಟ್ಟುಕೊಂಡರೆ ರುಚಿಕರವಾದ ಶುದ್ಧವಾದ ತುಪ್ಪ ಸಿದ್ಧ!