ಅತ್ತ ರಚಿತಾ ರಾಮ್‌ ಸಿನಿಮಾದ ಕಲಾವಿದ ವಿವೇಕ್ ಜೀವ ಕಳೆದುಕೊಂಡ.. ಆದರೆ ಇತ್ತ ನಿಖಿಲ್‌ ಮಾಡಿರುವ ಕೆಲಸ ನೋಡಿ..

0 views

ಕನ್ನಡ ಚಿತ್ರರಂಗದಲ್ಲಿ ಇನ್ನೂ ಸಹ ಮರೆಯಲಾಗದ ಮಾಸ್ತಿಗುಡಿ ಘಟನೆಯ ನೆನಪುಗಳು ಇನ್ನು ಹಸಿರಾಗೇ ಇದೆ. ಅಷ್ಟರಲ್ಲಾಗಲೇ ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದು ಹೋಗಿದೆ. ನಟ ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ಲವ್ ಯು ರಚ್ಚು ಸಿನಿಮಾದ ಚಿತ್ರೀಕರಣದ ವೇಳೆ ಸಾಹಸ ಕಲಾವಿದ ವಿವೇಕ್‌ ಜೀವ ಕಳೆದುಕೊಂಡ ಘಟನೆ ಚಿತ್ರರಂಗವನ್ನು ಮಾತ್ರವಲ್ಲದೇ ಸಿನಿಮಾವನ್ನೇ ನಂಬಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಬೆಚ್ಚಿ ಬೀಳಿಸಿದೆ. ತುತ್ತು ಅನ್ನಕ್ಕಾಗಿ ಸಾಹಸ ಕಲಾವಿದರ ಕೆಲಸಕ್ಕೆ ಬರುವ ಚಿಕ್ಕ ಚಿಕ್ಕ ವಯಸ್ಸಿನ ಯುವಕರು ಈ ರೀತಿ ಜೀವನವನ್ನೇ ಕಳೆದುಕೊಂಡು ಬಿಟ್ಟರೆ ಕುಟುಂಬದ ಗತಿಯೇನು ಎನ್ನುವಂತಾಗಿದೆ..

ಹೌದು ಸಿನಿಮಾರಂಗದಲ್ಲಿ ಹೆಸರು ಮಾಡಬೇಕು ಎಂದು ನೂರಾರು ಕನಸು ಕಂಡಿದ್ದ ವಿವೇಕ್ ಇದೀಗ ತನ್ನ ಜೀವನದ ಪಯಣವನ್ನೇ ಮುಗಿಸಿಬಿಟ್ಟಿದ್ದಾನೆ. ರಾಮನಗರದಲ್ಲಿ ಆಗಸ್ಟ್‌ 9 ರಂದು ಲವ್‌ ಯೂ ರಚ್ಚು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಇದರ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಸಾಹಸ ಕಲಾವಿದ ವಿವೇಕ್‌ ಕೆಲಸ ಮಾಡುತ್ತಿದ್ದರು. ಈ ವೇಳೆ ಹೈ ಟೆನ್ಶನ್‌ ವೈರ್‌ ತಗುಲಿ ವಿವೇಕ್‌ ಜೀವ ಕಳೆದುಕೊಳ್ಳುವಂತಾಯಿತು. ಇದೇ ಘಟನೆಯಲ್ಲಿ ಇನ್ನಿಬ್ಬರಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಇತ್ತ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಎಸ್‌ಪಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಐವರ ವಿರುದ್ಧ ದೂರು ದಾಖಲಾಗಿದೆ. ಮೂವರು ಆರೋಪಿಗಳು ನ್ಯಾಯಾಂಗದ ವಶದಲ್ಲಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.‌ ಇನ್ನಿಬ್ಬರು ಅಂದರೆ, ಚಿತ್ರದ ನಿರ್ಮಾಪಕರಾದ ಗುರು ದೇಶಪಾಂಡೆ ಹಾಗೂ ಮತ್ತೊಬ್ಬರು ನಾಪತ್ತೆಯಾಗಿದ್ದಾರೆ. ಚಿತ್ರದ ನಿರ್ಮಾಪಕರಾದ ಗುರು ದೇಶ್‌ಪಾಂಡೆ ಅವರು ಅದಾಗಲೇ ವಿವೇಕ್‌ ಕುಟುಂಬಸ್ಥರಿಗೆ ಕರೆ ಮಾಡಿ ಹತ್ತು ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದರು. ಈ ಬಗ್ಗೆ ವಿವೇಕ್‌ ಚಿಕ್ಕಪ್ಪ ಮಾಹಿತಿ ನೀಡಿದ್ದರು. ಇತ್ತ ಗುರುದೇಶಪಾಂಡೆ ಅವರ ಪತ್ನಿ ಇಂದು ಸುದ್ಧಿಗೋಷ್ಟಿ ನಡೆಸಿ ಹಣ ನೀಡುತ್ತಿರುವುದಾಗಿಯೂ ತಿಳಿಸಿದ್ದರು.

ಆದರೆ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ ಅಜಯ್ ರಾವ್ ಅವರಾಗಲಿ ಅಥವಾ ನಾಯಕಿ ರಚಿತಾ ರಾಮ್ ಅವರಾಗಲಿ ಯಾವುದೇ ಸಹಾಯ ಮಾಡಲು ಮುಂದಾಗಲಿಲ್ಲ. ರಚಿತಾ ರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿವೇಕ್‌ ಅವರ ಫೋಟೋ ಜೊತೆಗೆ ಶಾಂತಿ ಸಿಗಲಿ ಎಂದು ಪೋಸ್ಟ್ ಹಾಕಿ ಸುಮ್ಮನಾದರೆ ಇತ್ತ ಅಜಯ್ ರಾವ್ ಅವರು ವಿವೇಕ್ ಅವರ ಅಂತಿಮ ದರ್ಶನ ಪಡೆದು ಸುಮ್ಮನಾದರು. ಆದರೆ ಗಾಯಗೊಂಡಿರುವ ರಂಜಿತ್ ಅವರು ಹೇಳುವ ಪ್ರಕಾರ ಘಟನೆ ನಡೆದ ಸ್ಥಳದಲ್ಲಿಯೇ ಅಜಯ್ ರಾವ್ ಅವರು ಕುಳಿತಿದ್ದರೂ ಸಹ ನಮ್ಮ ಸಹಾಯಕ್ಕೆ ಬರಲಿಲ್ಲ ಎಂದಿದ್ದು ನಿಜಕ್ಕೂ ಸ್ಟಾರ್ ಗಿರಿಯ ಮುಂದೆ ಮಾನವೀಯತೆ ಮರೆಯಾಗಿ ಹೋಯ್ತಾ ಎಂದೆನಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈ ಬಗ್ಗೆ ಅಜಯ್ ರಾವ್ ಅವರನ್ನು ತರಾಟೆಗೂ ಸಹ ತೆಗೆದುಕೊಂಡಿದ್ದರು.

ಆದರೆ ಇದೆಲ್ಲದರ ನಡುವೆ ಈ ಸಿನಿಮಾಗೂ ತಮಗೂ ಸಂಬಂಧವೇ ಇಲ್ಲವಾದರೂ ನಟ ನಿಖಿಲ್ ಅವರು ವಿವೇಕ್ ಅವರ ಕುಟುಂಬಸ್ಥರ ನೆರವಿಗೆ ನಿಂತಿದ್ದಾರೆ. ಹೌದು ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ವಿವೇಕ್ ಅವರ ತಾಯಿಗೆ ಅದಾಗಲೇ ನಿಖಿಲ್ ಅವರು ಐವತ್ತು ಸಾವಿರ ರೂಪಾಯಿ ಹಣವನ್ನು ತಲುಪಿಸಿದ್ದಾರೆ. ಕಷ್ಟದಲ್ಲಿದ್ದವನಿಗೆ ಹುಲ್ಲು ಕಡ್ಡಿಯೂ ಆಸರೆ ಎನ್ನುವಂತೆ ಕೇವಲ ಮಾತಿಗೆ ಸೀಮಿತವಾಗುವ ಸ್ಟಾರ್ ಗಳ ನಡುವೆ ಆ ತಕ್ಷಣ ಹಣ ತಲುಪಿಸಿ ಕಷ್ಟಕ್ಕೆ ಸ್ಪಂದಿಸಿದ ನಿಖಿಲ್ ಅವರ ಗುಣ ನಿಜಕ್ಕೂ ಮೆಚ್ಚುವಂತದ್ದು‌. ನಿಖಿಲ್ ಅವರ ರೈಡರ್ ಸಿನಿಮಾದಲ್ಲಿ ವಿವೇಕ್ ಸಾಹಸ ದೃಶ್ಯವೊಂದರಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು ಎಂದು ತಿಳಿದುಬಂದಿದೆ. ಅದನ್ನು ನೆನಪಿಸಿಕೊಂಡು ವಿವೇಕ್ ಗೆ ಸಂತಾಪ ಸೂಚಿಸಿ ಅವರ ತಾಯಿಗೆ ನಿಖಿಲ್ ಅವರು ಹಣ ತಲುಪಿಸಿದ್ದಾರೆ.